ದಹನ ಕೋಷ್ಠ
ಅಂತರ್ದಹನ ಎಂಜಿನ್ನುಗಳಲ್ಲಿ ಶೀರ್ಷಕದ ಕಡೆ ಇರುವ ದಹನ ಕ್ರಿಯೆ ನಡೆಯುವ ಸ್ಥಳ. ಇಂಧನ ದಹನದಿಂದ ಉಷ್ಣ ಸಂಜನಿಸುತ್ತದೆ. ಕೊನೆಗೆ ಇದೇ ಯಾಂತ್ರಿಕ ಶಕ್ತಿಯಾಗಿ ಕಾರ್ಯ ಮಾಡುತ್ತದೆ. ಆದ್ದರಿಂದ ಎಂಜಿನ್ನಿನ ಓಟದಲ್ಲಿ ಇಂಧನದಹನ ಪ್ರಮುಖ ಪಾತ್ರ ವಹಿಸಿದೆ. ಇದು ಎಷ್ಟು ಅಚ್ಚುಕಟ್ಟಾಗಿ ನಡೆಯುತ್ತದೆ ಎಂಬುದು ದಹನಕೋಷ್ಠದ ಆಕಾರ, ಕವಾಟಗಳ ಸ್ಥಾನ ಮುಂತಾದ ಅನೇಕ ಸಂಗತಿಗಳನ್ನು ಅವಲಂಬಿಸಿದೆ. ದಹನಕೋಷ್ಠದ ವಿನ್ಯಾಸದಲ್ಲಿ ಗಮನಿಸಬೇಕಾದ ಮುಖ್ಯಾಂಶಗಳಿವು. ಕಡಿಮೆ ಬಡಿಯುವ (ನಾಕಿಂಗ್) ಪ್ರವೃತ್ತಿ, ಅಧಿಕ ಸೂಚಿತ ಅಶ್ವಸಾಮಥ್ರ್ಯ, ಅಧಿಕ ಉಷ್ಣದಕ್ಷತೆ, ಅಧಿಕ ಗಾತ್ರೀಯ ದಕ್ಷತೆ, ಸಂಕೋಚನ ಪ್ರಮಾಣ, ಕ್ಷೋಭೆ (ಟಬ್ರ್ಯುಲೆನ್ಸ್), ಅದುಮುವಿಕೆ (ಸ್ಕ್ವಿಶ್), ಕವಾಟಗಳ ಗಾತ್ರ ಮತ್ತು ಸ್ಥಳ, ಸೂಕ್ತ ಕವಾಟ ಶೀತನ ಮತ್ತು ಹೆರೆತ (ಲ್ಯೂಬ್ರಿಕೇಶನ್), ಕಡಿಮೆಯಿರುವ ಮೇಲ್ಮೈ ಹಾಗೂ ಗಾತ್ರಗಳ ನಡುವಿನ ಪ್ರಮಾಣ ಮುಂತಾದವು. ಇವುಗಳಲ್ಲಿ ಕೆಲವು ಪರಸ್ಪರ ವಿರುದ್ಧವಾದವು. ಹೀಗಾಗಿ ಪ್ರತಿಯೊಂದು ಅಂಶವನ್ನೂ ತೃಪ್ತಿಕರವಾಗಿ ನಿರ್ವಹಿಸುವುದು ಸಾಧ್ಯವಿಲ್ಲ. 

 	ಕೆಲವು ಅಂಶಗಳಲ್ಲಿ ಮಧ್ಯವರ್ತಿಮಾರ್ಗ ಅನುಸರಿಸುವುದು ಅನಿವಾರ್ಯವಾಗುತ್ತದೆ. ಅಲ್ಲದೆ ವಿನ್ಯಾಸಕಾರ ಪ್ರಕೃತದ ಅವಶ್ಯಕತೆಗಳಿಗಾಗಿ ಮಾತ್ರ ಲಕ್ಷ್ಯಕೊಟ್ಟರೆ ಸಾಲದು. ಭವಿಷ್ಯವನ್ನೂ ಊಹಿಸಿ ಮುಂದೆ ಕಡಿಮೆ ಬದಲಾವಣೆಗಳಿಂದ ವಿನ್ಯಾಸವನ್ನು ಉತ್ತಮಪಡಿಸುವ ರೀತಿಯಲ್ಲಿ ಇಂದಿನ ರಚನೆಯನ್ನು ಮಾಡಬೇಕು. ಸಂಕೋಚನದಿಂದಲೇ ಕಿಡಿಹೊತ್ತಿಸುವ ಎಂಜಿನ್ನುಗಳಲ್ಲಿ ಕೇವಲ ವಾಯುವನ್ನು ಮಾತ್ರ ಮೊದಲು ಸಿಲಿಂಡರಿನೊಳಕ್ಕೆ ಬಿಡಲಾಗುವುದು. ವಾಯುಪೂರ್ತಿ ಸಂಕೋಚನಗೊಂಡ ಬಳಿಕ ಇಂಧನ ಪ್ರವೇಶವಾಗುತ್ತದೆ. ಈ ಚಟುವಟಿಕೆ ನಡೆಯುವಾಗ ಕೊಂತ ಊಧ್ರ್ವ ನಿಶ್ಚಲ ಸ್ಥಿತಿಯಲ್ಲಿ ಇರುತ್ತದೆ. ಹೀಗಿರುವಾಗಲೇ ವಾಯುವಿನ ಅಕ್ಸಿಜನ್ನಿನೊಡನೆ ಇಂಧನ ಬೆರೆತು ಉರಿಯಬೇಕು. ಇದು ಉತ್ತಮವಾಗಿ ನಡೆಯಲು ಕ್ಷೋಭೆ ಪ್ರವಾಹ ಅಗತ್ಯ. ತಕ್ಕ ಕೋನದಲ್ಲಿ ಇಂಧನ ಕೋಷ್ಠವನ್ನು ಪ್ರವೇಶಿಸುವಂತೆ ವಿನ್ಯಾಸಮಾಡಿ ಈ ಕ್ಷೋಭೆಯನ್ನು ಉಂಟುಮಾಡುತ್ತಾರೆ.

 	ಕೆಲವು ಸಂಕೋಚನ ಕಿಡಿ ಎಂಜಿನ್ನುಗಳಲ್ಲಿ ಮುಖ್ಯ ಕೋಷ್ಠದ ಜೊತೆಗೆ ಪೂರ್ವ ಕೋಷ್ಠವನ್ನೂ ಏರ್ಪಡಿಸಿರುತ್ತಾರೆ. ಸಂಕೋಚನ ಹೊಡೆತದ ಅವಧಿಯಲ್ಲಿ ಸಿಲಿಂಡರ್ ವಾಯುವಿನ ಸಾಕಷ್ಟು ಭಾಗವನ್ನು ಚಿಕ್ಕ ಪೂರ್ವಕೋಷ್ಠಕ್ಕೆ ದಬ್ಬಲಾಗುವುದು. ಇಲ್ಲಿಕ್ಷೋಭೆ ಉಂಟುಮಾಡಿ ಇಂಧನವನ್ನು ಸರಬರಾಜು ಮಾಡಿದರೆ ಶೀಘ್ರಗತಿಯಲ್ಲಿ ಮಿಶ್ರವಾಗಿ ದಹನವಾಗುತ್ತದೆ. ಒರಟಾದ ಹಾಗೂ ಗದ್ದಲಮಯ ಎಂಜಿನ್ನಿನ ಓಟವನ್ನು ತಪ್ಪಿಸಲು ಪೂರ್ವಕೋಷ್ಠದಲ್ಲಿ ಅಧಿಕ ಉಷ್ಣತೆ ಇರುವಂತೆ ನೋಡಿಕೊಳ್ಳಲಾಗುವುದು. ಕಿಡಿ ವಿದ್ಯುತ್ತಿನ ಎಂಜಿನ್ನುಗಳಲ್ಲಿ ವಾಯು ಮತ್ತು ಇಂಧನವನ್ನು ಮಿಶ್ರಮಾಡಿಯೇ ಸಿಲಿಂಡರಿಗೆ ಊಡಲಾಗುವುದು. ಮಿಶ್ರಣದ ಸಂಕೋಚನಾನಂತರ ಕಿಡಿ ಹೊತ್ತಿಕೊಳ್ಳುತ್ತದೆ. ಆಗ ದಹನವಾಗಿ ಉಷ್ಣೊತ್ಪತ್ತಿಯಾಗುತ್ತದೆ. 

 ಈ ಎಂಜಿನ್ನುಗಳಲ್ಲಿ ಉಪಯೋಗಿಸುವ ದಹನಕೋಷ್ಠವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಕಿಡಿ ಹೊತ್ತಿಸುವ ಭಾಗ, ಅಘಾತ ಭಾಗ, ಸಿಡಿತ ಭಾಗ, ಕಿಡಿ ಹೊತ್ತಿಸುವ ಭಾಗದಲ್ಲಿ ಅತ್ಯಧಿಕ ಉಷ್ಣತೆ ಇರುತ್ತದೆ. ಅಲ್ಲದೆ ಇಲ್ಲಿನ ಲೋಹ ದಹನವನ್ನು ಹೆಚ್ಚು ಹೊತ್ತುತಾಳಿಕೊಳ್ಳಬೇಕು. ಇಲ್ಲಿಂದ ಉಷ್ಣ ಹಾನಿಯಾಗದಂತೆ ನೋಡಿಕೊಳ್ಳುವುದೂ ಮುಖ್ಯ. ಈ ಭಾಗದಲ್ಲಿ ನಿರ್ಗಮ ಕವಾಟವನ್ನು ಸ್ಥಾಪಿಸಬೇಕು. ಅಘಾತ ಭಾಗದಲ್ಲಿ ದಹನ ನಡೆಯುತ್ತಿರುವಾಗ ಕೊಂತ ಊಧ್ರ್ವ ನಿಶ್ಚಲ ಕೇಂದ್ರದ ಮೂಲಕ ಹಾದುಹೋಗುತ್ತಿರುವುದು. ಇದರಿಂದ ರಚನೆಯಲ್ಲಿ ಒತ್ತಡ ಏರಿಕೆಯ ಗರಿಷ್ಠ ಪರಿಣಾಮ ಕಾಣಿಸುತ್ತದೆ. ಇಲ್ಲಿ ಒತ್ತಡ ಏರಿಕೆಯ ದರವನ್ನು ತಗ್ಗಿಸುವುದು ಅಪೇಕ್ಷಣೀಯ. ಸಿಡಿತ ಭಾಗದಲ್ಲಿ ಹೋಲಿಕೆಯಾಗಿ ತಣ್ಣಗಿರುವ ಅಂತರ್ಗಮ ಕವಾಟವಿರುತ್ತದೆ. ಅಧಿಕ ಸಂಕೋಚನಗೊಂಡ ಮಿಶ್ರಣದ ಕೊನೆ ಭಾಗದ ಉಷ್ಣ ಹೀರಲು ಇಲ್ಲಿ ಅನುಕೂಲವಿದೆ. ಎಲ್ಲ ದಹನಕೋಷ್ಠಗಳೂ ಒಂದೇ ರೀತಿ ಇರುವುದಿಲ್ಲ. ಆಕಾರಗಳಲ್ಲಿ ವೈವಿಧ್ಯ ಉಂಟು. ಒಂದು ಆಕಾರ ಒಂದು ದೃಷ್ಟಿಯಿಂದ ಅಷ್ಟು ಉತ್ತಮವಾಗಿ ಇಲ್ಲದಿರುವ ಸಂಭವವೂ ಇದೆ. ಒಟ್ಟಿನಲ್ಲಿ ವಿವಿಧ ಆಕಾರಗಳನ್ನು ಸೇರಿಸಿ, ದಹನ ಕೋಷ್ಠಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಬಹುದು : ಬೆಣೆ ಆಕಾರದ ಕೋಷ್ಠಕ ಮತ್ತು ಅರ್ಧಗೋಳಾಕಾರದ ಕೋಷ್ಠ. ಬೆಣೆ ಆಕಾರದ ಕೋಷ್ಠದಲ್ಲಿ ಅದುಮು ವಿಸ್ತೀರ್ಣವಿರುತ್ತದೆ. [ಶೀರ್ಷಕದ ವಿಶಿಷ್ಟ ಆಕಾರದಿಂದ, ಕೊಂತ ಶೀರ್ಷಕದ ಒಂದು ಭಾಗವನ್ನು ಹೆಚ್ಚು ಕಡಿಮೆ ಮುಟ್ಟಿದರೆ (ಅದುಮುಭಾಗ)ಇನ್ನೊಂದು ಭಾಗಕ್ಕೂ ಶೀರ್ಷಕಕ್ಕೂ ಹೆಚ್ಚು ಅಂತರವಿರುತ್ತದೆ. ಅದುಮು ಭಾಗ ಮಿಶ್ರಣವನ್ನು ಅದುಮು ಕ್ಷೋಭೆಯನ್ನು ಉಂಟುಮಾಡುತ್ತದೆ]. ಈ ಬಗೆಯ ಕೋಷ್ಠದಲ್ಲಿ ವಿದ್ಯುತ್ ಕಿಡಿಯ ಸಾಧನವನ್ನು ಸಾಧಾರಣವಾಗಿ ಒಂದು ಪಾಶ್ರ್ವದಲ್ಲಿ ಸ್ಥಾಪಿಸಿರುತ್ತಾರೆ. ಇಲ್ಲಿ ಕಡಿಮೆ ಒತ್ತಡ ಏರಿಕೆ ಹಾಗೂ ನಿಧಾನಗತಿಯಿರುತ್ತದೆ. ಅರ್ಧಗೋಳಾಕಾರದ ಕೋಷ್ಠದಲ್ಲಿ ಅದುಮು ವಿಸ್ತೀರ್ಣ ಇರುವುದಿಲ್ಲ. ಅದ್ದರಿಂದ ಕ್ಷೋಭೆ ಉಂಟಾಗುವುದು ಕೋಷ್ಠದಲ್ಲಿನ ಮಿಶ್ರಣ ಚಲನೆಯನ್ನು ಅವಲಂಬಿಸಿದೆ. ವಿದ್ಯುತ್ ಕಿಡಿಯ ಸಾಧನ ಗುಮ್ಮಟದ ಕೇಂದ್ರಕ್ಕೆ ಹತ್ತಿರದಲ್ಲಿ ಇರುವುದು. ಇದರಿಂದ ಜ್ವಾಲೆ ಕ್ರಮಿಸಬೇಕಾದ ದೂರ ಕಡಿಮೆಯಾಗುತ್ತದೆ. ದಹನ ಶೀಘ್ರವಾಗಿ ಆಗುವುದು. ಒತ್ತಡ ಏರಿಕೆಯೂ ಶೀಘ್ರವಾಗಿ ಆಗುವುದು. ದೊಡ್ಡ ಕವಾಟಗಳನ್ನು ಉಪಯೋಗಿಸಬಹುದು. ಗಾತ್ರೀಯ ದಕ್ಷತೆ ಚೆನ್ನಾಗಿರುತ್ತದೆ.
							   			(ಕೆ.ಆರ್.ಎಮ್‍ಒ)
ಪರಿಷ್ಕರಣೆ:
ಹೆಚ್.ಆರ್.ಆರ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ